ಅಭಿರುಚಿಗಳು

ವ್ಯಕ್ತಿತ್ವದಲ್ಲಿ ಅಂತರ್ಗತವಾಗಿರುವ ಕೆಲವು ಕಾರಕಾಂಶಗಳು (ಫ್ಯಾಕ್ಟರ್ಸ್) ವಿವಿಧವಸ್ತು ಚಟುವಟಿಕೆ ಅಥವಾ ಜನ-ಇವುಗಳ ಕಡೆ ವ್ಯಕ್ತಿಯನ್ನು ಆಕರ್ಷಿಸುತ್ತವೆ ಅಥವಾ ಅಪಕರ್ಷಿಸುತ್ತವೆ. ಒಬ್ಬ ಯಾವುದಾದರೂ ಒಂದು ಕಾರ್ಯಕ್ಕೆ ತನ್ನ ಇಷ್ಟವನ್ನು ವ್ಯಕ್ತ ಪಡಿಸಿದಾಗ ಅಥವಾ ಆ ಕಾರ್ಯವನ್ನು ಆರಿಸಿಕೊಂಡು ನಿರ್ವಹಿಸುವಾಗ, ಆತನಿಗೆ ಅದರಲ್ಲಿ ಅಭಿರುಚಿಯಿದೆ (ಇಂಟರೆಸ್ಟ್) ಎಂದು ಹೇಳುತ್ತೇವೆ. ಸಾಮಾನ್ಯವಾಗಿ ಒಬ್ಬ ತನ್ನ ಜೀವನದ, ವೈಯಕ್ತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ರಂಗಗಳಲ್ಲಿ ತೋರಿಸುವ ವರ್ತನೆ, ಬುದ್ಧಿಶಕ್ತಿ, ಅಭಿಕ್ಷಮತೆ (ಆ್ಯಪ್ಟಿಟ್ಯೂಡ್) ಮೊದಲಾದವುಗಳನ್ನಲ್ಲದೆ, ಅಭಿರುಚಿಗಳನ್ನೂ ಅವಲಂಬಿಸಿರುತ್ತದೆ.

	ಅಭಿರುಚಿಗಳ ಸ್ವಭಾವ ಮತ್ತು ಮಾಪನಗಳ ವಿಷಯವಾಗಿ ಸಂಶೋಧಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಅವು ತಾತ್ಕಾಲಿಕ ಮತ್ತು ಅವಿಶ್ವಾಸನೀಯವಾಗಿರುವುದರಿಂದ ಅವುಗಳ ಅಧ್ಯಯನ ನಿರರ್ಥಕವೆಂದು ಕೆಲವರು ಮತ. ಆದರೆ ಅವು ಸಾಪೇಕ್ಷವಾಗಿ ಚಿರಸ್ಥಾಯಿಗಳೆಂಬುದು, ಅವುಗಳ ಅಧ್ಯಯನದಿಂದ ಶೈಕ್ಷಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನಕ್ಕೆ ಅನುಕೂಲವಾಗುತ್ತದೆ ಎಂಬುದು ಉಳಿದವರ ಅಭಿಮತ. ಆವರ ಸಂಶೋಧನೆಗಳಿಂದ, ಇದಕ್ಕೆ ಪರಿಪೋಷಕವಾದ ತಥ್ಯಾಂಶಗಳು ಬೆಳಕಿಗೆ ಬಂದಿವೆ. ವ್ಯಕ್ತಿಯ ಕಾರ್ಯಸಾಫಲ್ಯದ ನಿರ್ಧಾರದಲ್ಲಿ ಬುದ್ಧಿಶಕ್ತಿಯೊಂದನ್ನು ಬಿಟ್ಟರೆ, ಅಭಿರುಚಿಗಳದೇ ಮೇಲುಗೈ ಎಂಬುದು ಅವರ ನಂಬಿಕೆ. ಒಟ್ಟಿನಲ್ಲಿ, ಅವು ಒಬ್ಬ ವ್ಯಕ್ತಿಯ ವರ್ತನೆಗಳನ್ನು, ಅವುಗಳಿಂದ ದೊರಕಬಹುದಾದ ಮನಃತೃಪ್ತಿಯನ್ನು ನಿರ್ಧರಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಬಹುದು.

	ಶೈಕ್ಷಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನಕ್ಷೇತ್ರದಲ್ಲಿ ನಡೆದಿರುವ ಆಂದೋಲನದಿಂದಾಗಿ ಶಿಕ್ಷಣತಜ್ಞರ. ಮನೋವಿಜ್ಞಾನಿಗಳ ಗಮನ ಅಭಿರುಚಿಯ ಅಧ್ಯಯನ ದತ್ತ ಹರಿದಿದೆ. ಇದರಿಂದಾಗಿ ರೂಪುಗೊಂಡ ಅಭಿರುಚಿ ಪರೀಕ್ಷೆಗಳು, ಶೈಕ್ಷಣಿಕ ಔದ್ಯೋಗಿಕ ಮಾರ್ಗದರ್ಶನಗಳಿಗೆ ಮಾತ್ರವಲ್ಲದೆ, ಔದ್ಯೋಗಿಕ ಆಯ್ಕೆ ವರ್ಗೀಕರಣಗಳಿಗೂ ವಿಶೇಷರಿತಿಯಲ್ಲಿ ಸಹಕಾರಿಗಳಾಗಿವೆ.

	ಸ್ಥಿರತೆ ಮತ್ತು ಬದಲಾವಣೆ: ಪ್ರೌಢಶಾಲಾ ವಿದ್ಯಾಭ್ಯಾಸದ ಅವಧಿಯಲ್ಲಿ ಅಭಿವ್ಯಕ್ತಾಭಿರುಚಿಗಳು ಗಣನೀಯ ರೀತಿಯಲ್ಲಿ ಬದಲಾವಣೆ ಹೊಂದುತ್ತವೆ. ಆದರೆ ಅಂಶಮಾಲಾ ಅಭಿರುಚಿಗಳಲ್ಲಿ (ಇನ್ವೆಂಟರಿಡ್ ಇಂಟರೆಸ್ಟ್) ಕಿಶೋರಾವಸ್ಥೆಯಲ್ಲಿಯೇ (ಅಡೊಲ್ ಸೆನ್ಸ್) ಸ್ಥಿರತೆ ಕಂಡುಬರುವುದಲ್ಲದೆ, ವಯಸ್ಕ ಮಟ್ಟದಲ್ಲಿ ಅತ್ಯಲ್ಪ ಬದಲಾವಣೆ ಇರುತ್ತದೆ ಎಂಬುದು ತಿಳಿದುಬಂದಿದೆ. ಅನೇಕ ಸಂಶೋಧಕರು, ಸ್ಟ್ರಾಂಗನ ಅಭಿರುಚಿ ಅಂಶಮಾಲೆಯನ್ನು ಉಪಯೋಗಿಸಿ, ಅಭಿರುಚಿಗಳಲ್ಲಿ ಗಣನೀಯ ಸ್ಥಿರತೆಯಿರುವುದನ್ನು ಕಂಡುಹಿಡಿದಿದ್ದಾರೆ. ಸಾಮಾಜಿಕ ಶ್ರೇಯಾಭಿರುಚಿಯಲ್ಲಿ 14-18 ವರ್ಷಗಳವರೆಗೆ ಗಣನೀಯ ಬದಲಾವಣೆ ಕಂಡುಬರುತ್ತದೆ. ಆದರೆ 18-25 ವರ್ಷಗಳ ಅವಧಿಯಲ್ಲಿ ಆಗುವ ಬದಲಾವಣೆ ಅತ್ಯಲ್ಪ. ವೈಜ್ಞಾನಿಕ ಮತ್ತು ತಾಂತ್ರಿಕ ಅಭಿರುಚಿಗಳಲ್ಲಿ ಮಾತ್ರ ಕಿಶೋರಾವಸ್ಥೆಯಿಂದಲೇ ಬದಲಾವಣೆಗಳು ಅತ್ಯಲ್ಪವಾಗಿರುತ್ತವೆ. ಒಟ್ಟಿನಲ್ಲಿ 14 ಅಥವಾ 15 ವರ್ಷ ವಯಸ್ಸಿನಲ್ಲಿ ಅಳತೆ ಮಾಡಿದ ಅಭಿರುಚಿಗಳು ಹೆಚ್ಚು ಕಡಿಮೆ ಸ್ಥಿರವಾಗಿರುತ್ತವೆಂದು ಹೇಳಬಹುದು.

	ಕ್ಯೂಡರನ ಅಂಶಮಾಲೆಯನ್ನು ಉಪಯೋಗಿಸಿ ಟರ್ಟ್ ಪರೀಕ್ಷಾರ್ಥಿಗಳಲ್ಲಿ 8ನೆಯ ವರ್ಗದಲ್ಲಿದ್ದಾಗ ಕಂಡುಬಂದ ಅಭಿರುಚಿಗಳು. ಅವರ 12ನೆಯ ವಯಸ್ಸಿನಲ್ಲೂ ಹೆಚ್ಚು ಕಡಿಮೆ ಸ್ಥಿರವಾಗಿದ್ದುದನ್ನು ತೋರಿಸಿದ್ದಾನೆ. ಇದೇ ರೀತಿಯ ಫಲಿತಾಂಶಗಳು ರೋಸೆನ್ ಬಿ ನಡೆಸಿದ ಸಂಶೋಧನೆಗಳಿಂದಲೂ ಹೊರಬಿದ್ದಿವೆ.

	ಔದ್ಯೋಗಿಕ ಜಯ: ವ್ಯಕ್ತಿಗೆ ತನ್ನ ವೃತ್ತಿಯಲ್ಲಿರುವ ಅಭಿರುಚಿ ಮತ್ತು ಅದರಿಂದ ಆತ ಪಡೆಯುವ ಸಾಫಲ್ಯಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಸೂಪರ್ ಹೀಗೆ ಹೇಳುತ್ತಾನೆ: ಅಭಿಕ್ಷಮತೆ, ಬಾಹ್ಯಪ್ರೇರಕಶಕ್ತಿ ಮೊದಲಾದ ಕಾರಕಗಳು ನಿಯಂತ್ರಿತವಾಗಿಲ್ಲದಾಗ, ಔದ್ಯೋಗಿಕ ಜಯಕ್ಕೂ ಅಭಿರುಚಿಗೂ ಯಾವ ಸಂಬಂಧವೂ ಕಾಣುವುದಿಲ್ಲ. ಆದರೆ ನಿಯಂತ್ರಿತವಾದಾಗ ಸಂಬಂಧ ಕಾಣುತ್ತದೆ. ಟರ್ಮನ್ ಪ್ರತಿಭಾವಂತರ ಮೇಲೆ ನಡೆಸಿದ ಅಧ್ಯಯನದಿಂದಲೂ ಅಭಿರುಚಿ ಮತ್ತು ಔದ್ಯೋಗಿಕ ಜಯಗಳಿಗೆ ಗಣನೀಯ ಸಂಬಂಧವಿದೆ ಎಂಬುದು ವ್ಯಕ್ತವಾಗಿದೆ. ಕ್ಯೂಡರನ ಅಂಶಮಾಲೆಯನ್ನು ಉಪಯೋಗಿಸಿ, ಜಯಶಾಲೀ ಇಂಜಿನಿಯರುಗಳು, ಮಾರಾಟಗಾರರು ಮತ್ತು ಕಾರಕೂನರು ತಮ್ಮ ವೃತ್ತಿಗೆ ಸರಿಹೊಂದುವ ಕ್ಷೇತ್ರಗಳಲ್ಲಿ ಹೆಚ್ಚು ಅಂಕಗಳಿಸಿರುವುದನ್ನು ಬಾರ್ನೆಟ್ ಕಂಡುಹಿಡಿದಿದ್ದಾನೆ. ಇವುಗಳೊಂದಿಗೆ ಇತರ ಅಧ್ಯಯನಗಳ ಆಧಾರದ ಮೇಲೆ ಸೂಪರ್ ಹೀಗೆ ನಿರ್ಣಯಿಸಿದ್ದಾನೆ: ಇತರ ಕಾರಕಾಂಶಗಳ್ನು ನಿಯಂತ್ರಿಸಿದಾಗ, ಕಾರ್ಯದ ಸ್ವಭಾವ ಕ್ರಿಯಾಶೀಲತೆಯ ಮೇಲೆ ಪ್ರಭಾವ ಬೀರಿದಾಗ, ಸೂಕ್ತ ಒರೆಗಲ್ಲುಗಳನ್ನು ಉಪಯೋಗಿಸಿದಾಗ, ಅಭಿರುಚಿಗಳು ಔದ್ಯೋಗಿಕ ಜಯದೊಂದಿಗೆ ಸಾಕಷ್ಟು ಸಂಬಂಧ ಹೊಂದಿರುತ್ತವೆ.

	ಕಾರಕಗಳು (ಡಿಟೆರ್ಮಿನೆಂಟ್ಸ್): ಸಾಮಾಜಿಕ ಹಾಗೂ ಆರ್ಥಿಕ ಅಂತಸ್ತು, ಬುದ್ಧಿ ಶಕ್ತಿ, ಅಭಿಕ್ಷಮತೆ, ಸಾಮಾಜಿಕ ಪಾತ್ರ ನಿರೀಕ್ಷಣೆ (ಸೋಷಿಯಲ್ ರೋಲ್ ಎಕ್ಸ್ ಪೆಕ್ಟೇಷನ್), ವ್ಯಕ್ತಿತ್ವ, ಅನುಭವ ಮೊದಲಾದ ಕಾರಕಗಳು ಅಭಿರುಚಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆಯೆಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ವಿವಿಧ ಪಠ್ಯವಿಷಯ, ಕಸಬು ಮತ್ತು ಹವ್ಯಾಸಗಳ ಮೇಲಿನ ಇಷ್ಟಾನಿಷ್ಟಗಳು ಸಾಮಾಜಿಕ ಅಂತಸ್ತಿಗೆ ಅನುಗುಣವಾಗಿ ವ್ಯತ್ಯಾಸ ಹೊಂದುತ್ತವೆಂಬುದನ್ನು ಸ್ಟ್ರಾಂಗ್ ಮತ್ತು ಇತರರು ತಮ್ಮ ಅಧ್ಯಯನಗಳಿಂದ ತೋರಿಸಿದ್ದಾರೆ. ಅಲ್ಲದೆ, ಸಾಮಾಜಿಕ ಆರ್ಥಿಕ ಅಂತಸ್ತು, ಅಭಿರುಚಿಯ ಬೆಳೆವಣಿಗೆ ಮತ್ತು ಪ್ರಕಾಶನದ ಮೆಲೂ ಪ್ರಭಾವ ಬೀರುತ್ತದೆ. ಉದಾಹರಣೆಗೆ, ಮಧ್ಯಮವರ್ಗ ಮತ್ತು ಉನ್ನತ ಮಧ್ಯಮವರ್ಗದ ಪುರುಷರು ಆಯ್ಕೆ ಮಾಡಬಹುದಾದ ವೃತ್ತಿಗಳ ಮುನ್ಸೂಚನೆ (ಪ್ರೆಡಿಕ್ಷನ್) ಕೊಡುವುದರಲ್ಲಿ ಅಂಶಮಾಲಾಭಿರುಚಿಗಳು ಸಮರ್ಥವಾಗಿವೆ ಎಂಬುದನ್ನು ಮೆಕಾರ್ಥರ್ ಮತ್ತು ಸ್ಟೀವನ್ಸ್ ಕಂಡುಹಿಡಿದ್ದಾರೆ.

	ಅಭಿರುಚಿಗಳ ಬೆಳೆವಣಿಗೆಯಲ್ಲಿ, ಅಭಿಕ್ಷಮತೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂಬುದು ಅಭಿರುಚಿಪರಿಣತರ ಅಭಿಮತ. ಗೆಲವು, ಪುರಸ್ಕಾರ ಮತ್ತು ತೃಪ್ತಿಗಳನ್ನು ಪಡೆಯುವುದರಲ್ಲಿ ಸಾಮಥ್ರ್ಯದ (ಎಬಿಲಿಟಿ) ಪಾತ್ರವೂ ಮಹತ್ತ್ವದ್ದೆಂದೂ ಅವರ ಹೇಳಿದ್ದಾರೆ. ವ್ಯಕ್ತಿತ್ವ ಮತ್ತು ಅಭಿರುಚಿಗಳಿಗೆ ಸಂಬಂಧಪಟ್ಟ ಸಾಹಿತ್ಯದ ಸಮೀಕ್ಷೆಯಲ್ಲಿ ಅಭಿರುಚಿಯ ಬೆಳೆವಣಿಗೆ ಅಭಿಕ್ಷಮತೆಗಳಿಂದ ಪ್ರಭಾವಿತವಾಗುವುದಕ್ಕೆ ಬದಲು, ವ್ಯಕ್ತಿತ್ವದ ಬೆಳೆವಣಿಗೆಯ ಒಂದು ಭಾಗವಾಗಿದೆ ಎಂದು ಡಾರ್ಲೆ ಮತ್ತು ಹೆಗನ್ಹ್ ಹೇಳಿದ್ದಾರೆ. ಅವರ ಅಭಿಪ್ರಾಯದಲ್ಲಿ, ಪರಹಿತಭಾವ (ಆಲ್ಟ್ರೂಯಿಸಮ್) ಮತ್ತು ಘನತೆಗಳು ಅಭಿರುಚಿಗಳ ಪ್ರಮುಖ ಕಾರಕಗಳು. ಆದರೆ ಯಾವುದಾದರೊಂದು ಅಭಿರುಚಿಕಾರಕವನ್ನೇ ಏಕೈಕ ಕಾರಕವೆಂದು ಪರಿಗಣಿಸುವುದು, ಸಮಸ್ಯೆಯನ್ನು ಹೆಚ್ಚು ಸರಳೀಕರಿಸಿದಂತೆ ಆಗುತ್ತದೆಂಬ ಸೂಪರನ ಅಭಿಪ್ರಾಯ ಸಮಂಜಸವಾಗಿದೆ. ವಾಸ್ತವವಾಗಿ, ಅಭಿರುಚಿಗಳ ರೂಪಣದಲ್ಲಿ ಮೇಲೆ ಹೇಳಿದ ಎಲ್ಲ ಕಾರಕಗಳ ಪಾತ್ರವೂ ಇದೆ.

	ಮಾಪನ: ಅಭಿರುಚಿಗಳನ್ನು, ಅವುಗಳ ಅಭಿವ್ಯಕ್ತಿ, ಪ್ರಕಾಶನ, ಪರೀಕ್ಷೆಗಳು ಮತ್ತು ಅಂಶಮಾಲೆಗಳ ಮೂಲಕ ಅಧ್ಯಯನ ಮಾಡಬಹುದು. ಒಬ್ಬ ವ್ಯಕ್ತಿ, ಯಾವುದಾದರೂ ಚಟುವಟಿಕೆ ವಿಷಯ ಅಥವಾ ವಸ್ತುಗಳ ವಿಷಯವಾಗಿ ಭಾಷೆಯ ಮೂಲಕ ವ್ಯಕ್ತಪಡಿಸುವ ಇಷ್ಟಾನಿಷ್ಟಗಳೆಲ್ಲ ಅಭಿವ್ಯಕ್ತಾಭಿರುಚಿಗಳು. ಆದರೆ ಅವುಗಳಲ್ಲಿ ಕಾರ್ಯತಃ ನಿತರವಾಗಿರುವಾಗ, ಅವುಗಳಿಂದ ಆಕರ್ಷಿತ ಅಥವಾ ಅಪಕರ್ಷಿತವಾಗುವುದು ಪ್ರಕಾಶಿತಾಭಿರುಚಿಗಳು. ಅಭಿರುಚಿಪರೀಕ್ಷೆಗಳು, ಅವಧಾನ (ಅಟೆನ್‍ಷನ್) ಸ್ಮøತಿ ಶಬ್ದಸಂಪತ್ತು ಮೊದಲಾದವುಗಳ ಆಧಾರದ ಮೇಲೆ ಅಭಿರುಚಿಗಳು, ನಿರ್ಧರಿತವಾಗುತ್ತವೆ. ಅಭಿರುಚಿ ಅಂಶಮಾಲೆಗಳು ವ್ಯಾಪಕವಾಗಿ ಉಪಯೋಗದಲ್ಲಿವೆಯಲ್ಲದೆ, ಅವುಗಳಿಂದ ಗುಣನೀಯ ಪ್ರಯೋಜನವಾಗಿದೆಯೆಂದೂ ಹೇಳಬಹುದು.

	ಅಭಿರುಚಿ ಅಂಶಮಾಲೆಯಲ್ಲಿ, ದಿನನಿತ್ಯದ ಜೀವನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಪ್ರತಿಬಿಂಬಿಸುವ ಅನೇಕ ಅಂಶಗಳು ಇರುತ್ತವೆ. ಪರೀಕ್ಷಾರ್ಥಿ ಅವುಗಳಿಗೆ ತನ್ನ ಒಲವುಗಳನ್ನು ವ್ಯಕ್ತಪಡಿಸುತ್ತಾನೆ. ಆತನ ಅನುಕ್ರಿಯೆಗಳನ್ನು (ರೆಸ್ಪಾನ್ಸಸ್) ಪಾರಿಮಾಣಿಕ ವಿಶ್ಲೇಷಣೆಯ ಮೂಲಕ, ವಿವಿಧವೃತ್ತಿ ಅಥವಾ ಕಾರ್ಯಕ್ಷೇತ್ರಗಳಲ್ಲಿ ಆತನಿಗೆ ಇರಬಹುದಾದ ಅಭಿರುಚಿಗಳನ್ನು ಸಾಪೇಕ್ಷವಾಗಿ ತಿಳಿಸುವ ಒಂದು ಪ್ರಾಪ್ತಾಂಕಗಳ ಸರಣಿಯನ್ನು (ಸೀರೀಸ್ ಆಫ್ ಸ್ಕೋರ್ಸ್) ಪಡೆಯಬಹುದು.

	ಅಭಿರುಚಿಗಳ ಸ್ವಭಾವ ಮತ್ತು ಮಹತ್ತ್ವವನ್ನು ತಿಳಿಯುವುದರಲ್ಲಿ ಅಭಿರುಚಿ ಅಂಶಮಾಲೆಗಳು ಬಹುಮಟ್ಟಿಗೆ ಉಪಯುಕ್ತವಾಗಿವೆ. ಅವುಗಳ ಮೂಲಕ ಅಧಿಕಸಂಖ್ಯೆಯಲ್ಲಿ ಅಧ್ಯಯನಗಳು ನಡೆದಿವೆಯಲ್ಲದೆ, ಅಪೂರ್ವಜಯವೂ ಲಭಿಸಿದೆಯೆಂದು ಹೆಳಬಹುದು.

	ಔದ್ಯೋಗಿಕಾಭಿರುಚಿಗಳಲ್ಲಿ ಅಂತರ್ಗತವಾಗಿರುವ ವೈವಿಧ್ಯವನ್ನು ಅರ್ಥಮಾಡಿಕೊಳ್ಳಲು, ಕಾರಕಾಂಶ ವಿಶ್ಲೇಷಣೆಯೂ ಬಹುಮಟ್ಟಿಗೆ ಸಹಕಾರಿಯಾಗಿದೆ. ಈ ವಿಧಾನದ ಉಪಯುಕ್ತತೆಯ ವಿಷಯದಲ್ಲಿ ಮನಶ್ಯಾಸ್ತ್ರಜ್ಞ ಸ್ಟ್ರಾಂಗ್ ತನ್ನ ಅನುಮಾನವನ್ನು ವ್ಯಕ್ತಪಡಿಸಿದ್ದಾಗ್ಯೂ, ಔದ್ಯೋಗಿಕ ಅಭಿರುಚಿಗಳಲ್ಲಿ ಕಾರ್ಯಾತ್ಮಕ ಏಕತೆ ಇರುವುದಾದರೆ, ಅದನ್ನು ಗುರುತಿಸಿ ನೇರವಾಗಿ ಅಳತೆ ಮಾಡಲು ಸಾಧ್ಯವಾದ ಪರೀಕ್ಷೆಗಳನ್ನು ರಚಿಸಬೇಕು ಎಂದು ಆತ ಹೇಳಿದ್ದಾನೆ. ಅದರಂತೆ, ಔದ್ಯೋಗಿಕಾಭಿರುಚಿಯ ಕಾರಕಾಂಶಗಳು ನೈಜಮಾನಸಿಕ ಏಕತೆಗಳಾಗಿವೆ ಎಂಬ ನಂಬುಗೆಯನ್ನು ಗಿಲ್ ಫೋರ್ಡ್ ಮತ್ತು ಸಂಗಡಿಗರ ಸಂಶೋಧನೆಗಳು ಸ್ಥಿರಪಡಿಸುತ್ತವೆ. ಇಲ್ಲಿಯವರೆಗೆ ನಡೆದಿರುವ ಕಾರಕಾಂಶ ವಿಶ್ಲೇಷಣಾಧ್ಯಯನಗಳ ಆಧಾರದ ಮೇಲೆ, ಬಹುಮುಖ್ಯವಾಗಿ, ಹೊರಾಂಗಣ, ತಾಂತ್ರಿಕ, ವೈಜ್ಞಾನಿಕ, ಸಾಮಾಜಿಕ ಶ್ರೇಯಸ್ಸು, ಸೌಂದರ್ಯಾತ್ಮಕ, ಗುಮಾಸ್ತೆ, ವಾಣಿಜ್ಯ ವ್ಯವಹಾರ ಮೊದಲಾದ ಅಭಿರುಚಿಕಾರಕಾಂಶಗಳನ್ನು ಗುರುತಿಸಲಾಗಿದೆ.

	ಅಂಶಮಾಲೆಗಳು; ಅಭಿರುಚಿಗಳ ವಿಷಯವಾಗಿ, 1919-20ರಲ್ಲಿ ಅಮೆರಿಕಾದ ಕಾರ್ನಿ ತಾಂತ್ರಿಕಸಂಸ್ಥೆಯಲ್ಲಿ ನಡೆದ ವಿಚಾರಗೋಷ್ಠಿಯ ಫಲವಾಗಿ, ಅನೇಕ ಅಭಿರುಚಿ ಅಂಶಮಾಲೆಗಳ ರಚನೆಯಾಯಿತು. ಅವುಗಳ ರಚನೆಯಲ್ಲಿ ಬಹು ಮುಖ್ಯವಾಗಿ ಎರಡು ಅಂಶಗಳಿಗೆ ಗಮನಕೊಡಲಾಯಿತು. ಮೊದಲನೆಯದಾಗಿ, ಅಂಶಮಾಲೆಯಲ್ಲಿರಬೇಕಾದ ಅಂಶಗಳಿಗೆ, ಪರೀಕ್ಷಾರ್ಥಿಯ ಜೀವನದ ವಿವಿಧರಂಗಗಳ ಚಟುವಟಿಕೆಗಳನ್ನು ಪ್ರತಿಬಿಂಬಿಸುವ ಸಾಮಥ್ರ್ಯವಿರಬೇಕು. ಅಂದರೆ, ಆತ ತನ್ನ ದೈನಂದಿನ ಜೀವನದಲ್ಲಿ ಸಾಮಾನ್ಯವಾಗಿ ಪಡೆಯಬಹುದಾದ ಅನುಭವಗಳಿಗೆ ಅನುಗುಣವಾಗಿರಬೇಕು. ಎರಡನೆಯದಾಗಿ, ಪರೀಕ್ಷಾರ್ಥಿ ವ್ಯಕ್ತಪಡಿಸಿದ ಅನುಕ್ರಿಯೆಗಳಿಗೆ ಅನುಭವ ಜನ್ಯ (ಎಂಪಿರಿಕಲ್) ಕೀಲಿಕೈಗಳನ್ನು ರೂಪಿಸುವಂತಿರಬೇಕೆಂಬುದು. ಇದು ಸಾಧ್ಯವಾಗಬೇಕಾದರೆ, ಒಂದು ವೃತ್ತಿಯಲ್ಲಿರುವ ಜನರ ಅಭಿರುಚಿಗಳಲ್ಲಿ ಸಾಮ್ಯವೂ ಮತ್ತು ಇತರ ವೃತ್ತಿಗಳಲ್ಲಿರುವ ಜನರ ಅಭಿರುಚಿಗಳಿಂದ ಭಿನ್ನತೆಯೂ ಇರಬೇಕಾದುದು ಅವಶ್ಯ. ಅಲ್ಲದೆ, ವಿವಿಧ ವೃತ್ತಿಸಮೂಹಗಳ ಅಭಿರುಚಿಗಳಲ್ಲಿರುವ ಪರಸ್ಪರ ವ್ಯತ್ಯಾಸ ಕೇವಲ ವೃತ್ತಿಚಟುವಟಿಕೆಗಳಿಗೆ ಸೀಮಿತವಾಗಿರದೆ, ವೃತ್ತಿಜೀವನದ ಇತರ ರಂಗಗಳಾದ ಹವ್ಯಾಸಗಳು, ಕ್ರೀಡೆಗಳು, ಸಾಮಾಜಿಕ ಸಂಬಂಧಗಳು-ಇವೇ ಮೊದಲಾದವುಗಳಲ್ಲೂ ಕಂಡುಬರಬೇಕು.

	ಸ್ಟ್ರಾಂಗನ ಔದ್ಯೋಗಿಕಾಭಿರುಚಿಸೂಚಿ: ಮೇಲ್ಕಂಡ ತತ್ತ್ವಗಳನ್ನನುಸರಿಸಿ ರಚಿತವಾದ ಅಭಿರುಚಿ ಅಂಶಮಾಲೆಗಳಲ್ಲಿ ಸ್ಟ್ರಾಂಗನ ಈ ಸೂಚಿ ಅತ್ಯಂತ ಮಹತ್ವಪೂರ್ಣವಾದುದೂ ಉಪಯುಕ್ತವಾದುದೂ ಆಗಿದೆ. ಅದರ ಮೇಲೆ ನಡೆದಿರುವ, ನಡೆಯುತ್ತಿರುವ ಸತತಸಂಶೋಧನೆ, ಪರಿಷ್ಕರಿಣ ಮತ್ತು ವ್ಯಾಪ್ತಿಯ ದೃಷ್ಟಿಯಿಂದಲೂ ಈ ಅಂಶಮಾಲೆ ವಿಶಿಷ್ಟವಾದುದು.

	ಸ್ಟ್ರಾಂಗನ ಅಂಶಮಾಲೆಯಲ್ಲಿ, ಪುರುಷರು ಮತ್ತು ಸ್ತ್ರೀಯರಿಗೆ ಪ್ರತ್ಯೇಕ ರಚನಾ ಬಂಧಗಳಿವೆ (ಫಾರಮ್ಸ್). ಪುರುಷರಿಗಾಗಿರುವ ರಚನಾಬಂಧದಲ್ಲಿ 400 ಅಂಶಗಳಿವೆ. ವೃತ್ತಿಗಳು; ಪಾಠ್ಯವಿಷಯಗಳು; ಮನೋರಂಜನೆಗಳು; ಗಡಿಯಾರ ರಿಪೇರಿ ಮಾಡುವುದು, ಭಾಷಣ ಮಾಡುವುದು - ಇವೇ ಮೊದಲಾದ ಹಲವು ಬಗೆಯ ಚಟುವಟಿಕೆಗಳು, ಈ ವಿಭಾಗಗಳಲ್ಲಿರುವ ಪ್ರತಿಯೊಂದು ಅಂಶಕ್ಕೂ ಪರಿಕ್ಷಾರ್ಥಿ ಅದು ತನಗೆ ಪ್ರಿಯವಾದುದೊ ಅಪ್ರಿಯವಾದುದೊ ಅಥವಾ ಅದರ ವಿಷಯವಾಗಿ ತನಗಿರುವುದು ಉದಾಸೀನಭಾವವೊ ಎಂಬುದನ್ನು ವ್ಯಕ್ತಪಡಿಸಬೇಕು. ಉಳಿದ ಮೂರು ವಿಭಾಗಗಳು, ಚಟುವಟಿಕೆಗಳು, ಜೊತೆಗೂಡಿರುವ ಅಂಶಗಳು ಮತ್ತು ಸಾಮಥ್ರ್ಯ ಹಾಗೂ ಇತರ ಲಕ್ಷಣಗಳು. ಇವುಗಳಲ್ಲಿ ಮೊದಲನೆಯ ವಿಭಾಗದ ಅಂಶಗಳಿಗೆ, ಪರೀಕ್ಷಾರ್ಥಿ ಇಷ್ಟಾನುಸಾರವಾಗಿ ಶ್ರೇಣ್ಯಂಕಗಳನ್ನು (ರ್ಯಾಂಕ್ಸ್) ಬರೆಯಬೇಕು; ಎರಡನೆಯದಾಗಿ ವಿಭಾಗದ ಅಂಶಗಳನ್ನು ಪರಸ್ಪರ ಹೋಲಿಸಿ ಆಯ್ಕೆಯನ್ನು ಸೂಚಿಸಬೇಕು ಮತ್ತು ಮೂರನೆಯ ವಿಭಾಗದಲ್ಲಿ ಕೊಟ್ಟಿರುವ ಸಾಮಥ್ರ್ಯ ಮತ್ತು ಇತರ ಲಕ್ಷಣಗಳಿಗೆ ತನಗನುಗುಣವಾದ ರೀತಿಯಲ್ಲಿ ಬೆಲೆ ಕಟ್ಟಬೇಕು.

	ಸ್ಟ್ರಾಂಗನ ಅಂಶಮಾಲೆಗೆ 50ಕ್ಕಿಂತಲೂ ಹೆಚ್ಚು ವ್ಯಕ್ತಿಗಳಿಗೆ ಅಂಗೀಕರಣ ಕೀಲಿಕೈಗಳನ್ನು ರೂಪಿಸಲಾಗಿದೆ. ಅವುಗಳ ರೂಪಣೆ, ಒಂದು ವೃತ್ತಿಯಲ್ಲಿರುವ ಉದ್ಯೋಗಸ್ಥರ ಅಭಿರುಚಿಗಳು, ಸಾಮಾನ್ಯ ಜನರ ಅಭಿರುಚಿಗಳಿಂದ ಎಷ್ಟು ಭಿನ್ನವಾಗಿದೆ ಎಂಬ ತತ್ತ್ವವನ್ನವಲಂಬಿಸಿದೆ. ಅಂದರೆ, ಯಾವುದಾದರೂ ವೃತ್ತಿಯ ಜನರನ್ನು ಸಾಮಾನ್ಯ ಜನರಿಂದ ಗಮನೀಯವಾಗಿ ಪ್ರತ್ಯೇಕಿಸುವ ಸಾಮಥ್ರ್ಯವುಳ್ಳ ಅಭಿರುಚಿ ಅಂಶಗಳು, ಆ ವೃತ್ತಿ ಅಂಗೀಕರಣ ಕೀಲಿಗೈಯಲ್ಲಿ ಇರುತ್ತವೆ.

	ಈ ಅಂಶಮಾಲೆಗೆ ದೊರೆಯುವ ಅನುಕ್ರಿಯೆಗಳಿಗೆ ನಿರ್ಧರಿಸಲ್ಪಟ್ಟ ಪ್ರಾಪ್ತಾಂಶಗಳನ್ನು ಸೇಕಡಾತ್ಮಕ ಪ್ರಮಾಣ (ಸ್ಟ್ಯಾಂಡರ್ಡ್) ಅಂಕಗಳನ್ನಾಗಿ ಪರಿವರ್ತಿಸಲಾಗುತ್ತದೆ. ಈ ಅಂಶಮಾಲೆಗೆ ಪ್ರಮಾಣಕಗಳನ್ನೂ (ನಾರಮ್ಸ್) ಕೊಡಲಾಗಿದೆ. ಇದಲ್ಲದೆ, ಪ್ರಾಪ್ತಾಂಕಗಳನ್ನು ಅಕ್ಷರವರ್ಗಗಳ (ಲಿಟರ್ ಗ್ರೇಡ್) ಮೂಲಕವೂ ವ್ಯಕ್ತಪಡಿಸಬಹುದು.

	ವ್ರತ್ತಿಕೀಲಿಕೈಗಳು ಮಾತ್ರವಲ್ಲದೆ ಸ್ಟ್ರಾಂಗನ ಅಂಶಮಾಲೆಗೆ ನಾಲ್ಕು ವಿಶಿಷ್ಟಕೀಲಿ ಕೈಗಳ ರಚನೆಯೂ ಆಗಿದೆ. ಅಭಿರುಚಿ ಪಕ್ವತೆ, ಪುರುಷತ್ವ, ಸ್ತ್ರೀತ್ವ ವೃತ್ತಿ ಅಂತಸ್ತು ಮತ್ತು ವಿಶೇಷಜ್ಞತೆಯ ಮಟ್ಟ ಸ್ಪೆಷಲೈಸೇಷನ್ ಲೆವಲ್.

	ಈ ಅಂಶಮಾಲೆಗೆ ವಿಷಮ-ಸಮ ವಿಶ್ವಸನೀಯತೆಗಳು ರಿಲೈಯಬಿಲಿಟೀಸ್ ಸಮ ಸಂಬಂಧ 0.8ರ ಸುತ್ತ ಕೇಂದ್ರೀಕೃತವಾಗಿದೆ. ಮೂಲತಃ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಪರೀಕ್ಷಿಸಲಾದ ವ್ಯಕ್ತಿಗಳ ಪ್ರಾಪ್ತಾಂಕಗಳಲ್ಲಿ, ದೀರ್ಘ ಕಾಲಾಂತರ ಪುನರ್ಪರೀಕ್ಷೆಗಳು ಗಮನಾರ್ಹ ಸ್ಥಿರತೆಯನ್ನು ತೋರಿಸಿವೆ. 22 ವರ್ಷಗಳಷ್ಟು ಅಂತರವಿದ್ದ ಪರೀಕ್ಷೆ ಮತ್ತು ಮರುಪರೀಕ್ಷೆಗಳಲ್ಲಿ ಪಡೆದ ಪ್ರಾಪ್ತಾಂಕಗಳಲ್ಲಿ ಸಮ ಸಂಬಂಧಗಳು ಸರಾಸರಿಯಾಗಿ 70-80ರ ವರೆಗೆ ವ್ಯತ್ಯಾಸ ಹೊಂದುವುದು ಕಂಡುಬಂದಿದೆ. ಈ ರೀತಿಯ ಅನುಗತಾಧ್ಯಯನಗಳು ಸಿಂಧುತ್ವದ ವ್ಯಾಲಿಡಿಟಿ ದೃಷ್ಟಯಿಂದಲೂ ಪ್ರಾರಂಭಿಕ ಅಭಿರುಚಿ ಪ್ರಾಪ್ತಾಂಕಗಳಿಗೂ ಮತ್ತು ಪ್ರಾಸಂಗಿಕ ವೃತ್ತಿ ಆಯ್ಕೆಗಳಿಗೂ ನಡುವೆ ಗಮನೀಯ ಹೋಲಿಕೆಯನ್ನು ಸೂಚಿಸುತ್ತದೆ.

	ಕ್ಯೂಡರನ ಆಯ್ಕೆ ಸಂಬಂಧ: ವ್ಯಾಪ್ತ ಉಪಯುಕ್ತತೆಯುಳ್ಳ ಮತ್ತೊಂದು ಅಂಶಮಾಲೆ ಇದು. ಸ್ಟ್ರಾಂಗನ ಅಂಶಮಾಲೆಗೆ ಹೋಲಿಸಿದರೆ ಇದು ಇತ್ತೀಚಿನದಲ್ಲದೆ ಅದರಿಂದ ಹಲವು ರೀತಿಯಲ್ಲಿ ವಿಭಿನ್ನವಾದುದೂ ಆಗಿದೆ. ವಿಶಿಷ್ಟ ವೃತ್ತಿಗಳಿಗೆ ಬದಲಾಗಿ ಕಡಿಮೆ ಸಂಖ್ಯೆಯ ವಿಶಾಲ ಕಾರ್ಯಕ್ಷೇತ್ರಗಳಲ್ಲಿ ವ್ಯಕ್ತಿಗೆ ಇರಬಹುದಾದ ಅಭಿರುಚಿಗಳನ್ನು ಸಾಪೇಕ್ಷವಾಗಿ ಸೂಚಿಸುವುದೇ ಇದರ ಪ್ರಮುಖೋದ್ದೇಶ. ಮೂಲತಃ ಇದರ ಅಂಶಗಳು ತರ್ಕ ಸಿಂಧುತ್ವದ ಆಧಾರದ ಮೇಲೆ ರೂಪಿತವಾಗಿವೆ. ಪ್ರೌಢಶಾಲಾ ವಿದ್ಯಾರ್ಥಿ ಮತ್ತು ವಯಸ್ಕರ ಗುಂಪುಗಳ ಅನುಕ್ರಿಯೆಗಳ ಆಧಾರದ ಮೇಲೆ ವ್ಯಾಪಕವಾದ ಅಂಶ ವಿಶ್ಲೇಷಣೆ ನಡೆದಿದೆ. ಹಿರಿಯ ಮಟ್ಟದ ಅಂತರಸ್ಥಾಯಿತ್ವ ಮತ್ತು ವಿವಿಧ ಗುಂಪುಗಳ ನಡುವೆ ಪರಸ್ಪರ ಕನಿಷ್ಠ ಸಂಬಂಧವನ್ನು ತೋರಿಸುವ ಅಂಶಗಳನ್ನು ರೂಪಿಸುವುದೇ ಈ ವಿಶ್ಲೇಷಣೆಯ ಉದ್ದೇಶ.

	ಈ ಅಂಶಮಾಲೆಯಲ್ಲಿ, 160 ನಿರ್ಬಂಧಿತ ಆಯ್ಕೆಯ ಅಂಶಗಳಿವೆ. ಒಂದೊಂದು ಅಂಶದಲ್ಲೂ ಮೂರು ಮೂರು ಚಟುವಟಿಕೆಗಳನ್ನು ಕೊಡಲಾಗಿದೆ. ಉದಾಹರಣೆಗೆ, ಪಕ್ಷಿಗಳ ಗೂಡು, ಮನೆ, ಪಂಜರ ಕಟ್ಟುವುದು, ಪಕ್ಷಿಗಳ ರೇಖಾಕೃತಿಗಳನ್ನು ಬರಿಯುವುದು, ಇತ್ಯಾದಿ.

	ಈ ಅಂಶದಲ್ಲಿರುವ ಚಟುವಟಿಕೆಗಳು ಒಂದೊಂದೂ ಒಂದೊಂದೂ ಅಭಿರುಚಿಯನ್ನು ವ್ಯಕ್ತಪಡಿಸುತ್ತವೆ. ಪರೀಕ್ಷಾರ್ಥಿ ಸಾಪೇಕ್ಷವಾಗಿ ತನ್ನ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಬೇಕು. ಮೂರರಲ್ಲಿ ಹೆಚ್ಚು ಪ್ರಿಯವಾದ ಚಟುವಟಿಕೆಗೆ 2 ಅಂಕವನ್ನು, ಹೆಚ್ಚು ಅಪ್ರಿಯವಾದುದಕ್ಕೆ 0 ಅಂಕವನ್ನೂ ಉಳಿದುದಕ್ಕೆ 1 ಅಂಕವನ್ನು ಕೊಡಲಾಗುತ್ತದೆ. ಪ್ರತಿಯೊಂದು ಚಟುವಟಿಕೆಗಳೊಂದಿಗಿರುವ ಅದರ ಎಲ್ಲ ಹೋಲಿಕೆಗಳಿಂದ ದೊರೆತ ಅಂಕಗಳ ಮೊತ್ತವೇ ಅದರ ಪ್ರಾಪ್ತಾಂಕ. ಈ ರೀತಿಯ ಪ್ರಾಪ್ತಾಂಕಗಳನ್ನು ಪ್ರಮಾಣಾಂಕಗಳಾಗಿ ಮಾರ್ಪಡಿಸಲಾಗುತ್ತದೆ. ಇದಲ್ಲದೆ, ಪ್ರೌಢಶಾಲೆ, ಕಾಲೀಜು ಮತ್ತು ವಯಸ್ಕರ ಗುಂಪುಗಳೇ ಸ್ತ್ರೀ ಪುರುಷರಿಗೆ ಪ್ರತ್ಯೇಕವಾದ ಪ್ರಮಾಣಕಗಳು ಸಿದ್ಧವಾಗಿವೆ. ಅಲ್ಲದೆ ಅಭಿರುಚಿಗಳ ಸಮಗ್ರ ಚಿತ್ರವನ್ನು ಕೊಡುವ ರೇಖಾಕೃತಿಗಳನ್ನೂ (ಪ್ರೊಫೈಲ್) ರೂಪಿಸಲಾಗಿದೆ.

	ಆಂಶಮಾಲೆಯಲ್ಲಿನ ಅಂಶಗಳ ಆಧಾರದ ಮೇಲೆ ಕೆಳಗಿನ ವೃತ್ತಿಕ್ಷೇತ್ರಗಳಿಗೆ ಕೀಲಿಕೈಗಳನ್ನು ರೂಪಿಸಲಾಗಿದೆ.
		ತಾಂತ್ರಿಕ			ವೈಜ್ಞಾನಿಕ		ಸಾಹಿತ್ಯಾತ್ಮಕ		ಗುಮಾಸ್ತೆ
		ಗಣನಾತ್ಮಕ		ಪ್ರೇರಕಾತ್ಮಕ	ಸಂಗೀತಾತ್ಮಕ		ಹೊರಾಂಗಣ
		ಕಾಂಪ್ಯುಟೇಷನಲ್		ಪರ್‍ಸುಏಸಿವ್
		ಕಲಾತ್ಮಕ	ಸಮಾಜ ಸೇವಾತ್ಮಕ

	ಕ್ಯೂಡರನ ಅಂಶಮಾಲೆಗೆ ವಿಶ್ವಸನೀಯತೆಗಳ ಪ್ರಾಪ್ತ ಸಮಸಂಬಂಧಗಳು 0.9 ಸುತ್ತಾ ಕೇಂದ್ರಿತವಾಗಿವೆ. ಈ ಅಂಶಮಾಲೆಯ ಸಿಂಧುತ್ವಕ್ಕೆ ಸಂಬಂಧಪಟ್ಟಂತೆ ಅನೇಕ ಅಧ್ಯಯನಗಳು ನಡೆದಿವೆ. ಪ್ರಾಪ್ತಾಂಕ ಮತ್ತು ಸ್ವವರ್ಗೀಕರಣಗಳ ಸಮಸಂಬಂಧ 0.39ರಿಂದ 0.66 ವರೆಗೆ ವ್ಯತ್ಯಾಸ ಹೊಂದುತ್ತದೆ.

	ಇತರ ಅಂಶಮಾಲೆಗಳು: ಸ್ಟ್ರಾಂಗ್ ಮತ್ತು ಕ್ಯೂಡರ್ ಇವರುಗಳ ಅಂಶಮಾಲೆಗಳಲ್ಲದೆ ಇನ್ನೂ ಅನೇಕ ಉಪಯುಕ್ತ ಅಂಶಮಾಲೆಗಳು ಸಿದ್ಧವಾಗಿವೆ. ಇವುಗಳಲ್ಲಿ ತರ್ಸ್‍ಟನ್ನನ ಅಭಿರುಚಿಪಟ್ಟಿ, ಲೀ-ತಾರ್ಪೆ ಅಭಿರುಚಿ ಅಂಶಮಾಲೆ, ಗಿಲ್ ಫೋರ್ಡ್-ಸ್ನೀಡೌಮನ್-ಜಿûಮ್ಮರ್ಮನ್ ಅಭಿರುಚಿಸಮೀಕ್ಷೆ ಮುಂತಾದುವುಗಳನ್ನು ಹೆಸರಿಸಬಹುದು. ಈಗ ಮೊದಲಾದುವುಗಳಲ್ಲಿ ಪರಸ್ಪರ ವ್ಯತ್ಯಾಸ ಕಂಡು ಬಂದರೂ ಕೆಲವು ಸಾಮಾನ್ಯ ಲಕ್ಷಣಗಳು ಅಂತರ್ಗತವಾಗಿರುವುದನ್ನು ಕಾಣಬಹುದು. 

	ಔದ್ಯೋಗಿಕ ಅಭಿರುಚಿಗಳಿಗೆ ಸಂಬಂಧಪಟ್ಟಂತೆ ನಮ್ಮ ದೇಶದಲ್ಲೂ ಅಲ್ಪಸ್ವಲ್ಪ ಸಂಶೋಧನೆ ನಡೆದಿದೆ. ಇದರಲ್ಲಿ ಬಹುಮುಖ್ಯವಾಗಿ ಬಿ.ಕೃಷ್ಣನ್, ಚಟರ್ಜಿ, ಜಿಂಗ್ರನ್ ರಾಷ್ಟ್ರೀಯ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆ, ರಾಷ್ಟ್ರಮಟ್ಟದಲ್ಲಿ ಒಂದು ಔದ್ಯೋಗಿಕಾಭಿರುಚಿ ಅಂಶಮಾಲೆಯನ್ನು ರಚಿಸುವ ಯೋಜನೆಯನ್ನು ಕಾರ್ಯಗತ ಮಾಡುತ್ತಿದೆ. ನಾಲ್ಕು ಭಾಷೆಗಳಲ್ಲಿ (ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್) ಇದು ಸಿದ್ಧವಾಗುತ್ತಿದೆ. ಇದಕ್ಕಾಗಿ ದೇಶದ ವಿವಿಧ ಭಾಗಗಳಲ್ಲಿ ಐದು ಕಾರ್ಯಕ್ಷೇತ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮನೋವಿಜ್ಞಾನ ವಿಭಾಗವೂ ಒಂದು. ಪ್ರೌಢಶಾಲೆ ಮತ್ತು ಕಾಲೇಜು ಮಟ್ಟಗಳಿಗೆ ಪ್ರತ್ಯೇಕ ರಚನಾಬಂಧಿಗಳು ರೂಪಗೊಳ್ಳುತ್ತಿವೆ. ಈ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಾಗ, ಶೈಕ್ಷಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನಗಳಿಗೆ ಅತ್ಯಂತ ಉಪಯುಕ್ತವಾದ ಒಮದು ಸಾಧನ ಲಭ್ಯವಾಗುವುದರಲ್ಲಿ ಸಂದೇಹವಿಲ್ಲ.			
(ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ